Delhi CM-ದೆಹಲಿ ಮುಖ್ಯಮಂತ್ರಿ ಹುದ್ದೆಗೆ 50 ವರ್ಷದ ರೇಖಾ ಗುಪ್ತಾ ಅವರ ಹೆಸರು ಅಂತಿಮಗೊಂಡಿದೆ. ಮೂಲಗಳ ಪ್ರಕಾರ, ಆರೆಸ್ಸೆಸ್ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಇದನ್ನು ಒಪ್ಪಿಕೊಳ್ಳಲಾಗಿದೆ. ಪಕ್ಷದ ವೀಕ್ಷಕರಾದ ರವಿಶಂಕರ್ ಪ್ರಸಾದ್ ಮತ್ತು ಓಂ ಪ್ರಕಾಶ್ ಧಂಕರ್ ಅವರು ಬಿಜೆಪಿ ಕಚೇರಿಗೆ ತಲುಪಿದ ನಂತರ ನಡೆದ ಸಭೆಯಲ್ಲಿ ಈ ನಿರ್ಧಾರ ಘೋಷಣೆಯಾಯಿತು.
ರೇಖಾ ಗುಪ್ತಾ ಅವರೊಂದಿಗೆ ಮುಖ್ಯಮಂತ್ರಿಯ ಹುದ್ದೆಗೆ ಪರ್ವೇಶ್ ವರ್ಮಾ, ಅನೀಶ್ ಸೂದ್, ವಿಜೇಂದರ್ ಗುಪ್ತಾ ಹಾಗೂ ಸತೀಶ್ ಉಪಾಧ್ಯಾಯ ಅವರ ಹೆಸರುಗಳೂ ಚರ್ಚೆಗೆ ಬಂದಿದ್ದವು. ಆದರೆ ಸಭೆಯ ಅಂತಿಮ ನಿರ್ಧಾರದಲ್ಲಿ ರೇಖಾ ಗುಪ್ತಾ ಆಯ್ಕೆಗೊಂಡಿದ್ದಾರೆ. ಮುಖ್ಯಮಂತ್ರಿಯೊಂದಿಗೆ 6 ಮಂದಿ ಸಚಿವರು ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮಾಹಿತಿಯಿದೆ
ಇತ್ತೀಚಿನ ದೆಹಲಿ ಚುನಾವಣೆಯಲ್ಲಿ 10 ವರ್ಷಗಳ ಆಮ್ ಆದ್ಮಿ ಪಕ್ಷದ ಆಡಳಿತ ಅಂತ್ಯಗೊಂಡಿದ್ದು, ಬಿಜೆಪಿ 27 ವರ್ಷಗಳ ನಂತರ ದೆಹಲಿಯಲ್ಲಿ ಅಧಿಕಾರ ಸ್ಥಾಪಿಸಿದೆ. 70 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 48 ಸೀಟುಗಳಲ್ಲಿ ಜಯ ಸಾಧಿಸಿದ್ದು, ಆಮ್ ಆದ್ಮಿ ಪಕ್ಷ 22 ಸೀಟುಗಳನ್ನಷ್ಟೇ ಗೆದ್ದಿದೆ. ಕಾಂಗ್ರೆಸ್ ಮತ್ತೊಮ್ಮೆ ಖಾತೆ ತೆರೆಯಲು ವಿಫಲವಾಗಿದೆ. ಪರ್ವೇಶ್ ವರ್ಮಾ ಉಪಮುಖ್ಯಮಂತ್ರಿಯಾಗಲಿದ್ದು, ಸ್ಪೀಕರ್ ಆಗಿ ವಿಜೇಂದರ್ ಗುಪ್ತಾ ಆಯ್ಕೆಯಾಗಿದ್ದಾರೆ.
ರೇಖಾ ಗುಪ್ತಾ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು
ರೇಖಾ ಗುಪ್ತಾ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಶಾಲಿಮಾರ್ ಭಾಗ್ ಕ್ಷೇತ್ರದಲ್ಲಿ ಅವರು 29,595 ಮತಗಳ ಅಂತರದಿಂದ ಆಮ್ ಆದ್ಮಿ ಪಕ್ಷದ ವಂದನಾ ಕುಮಾರಿಯನ್ನು ಸೋಲಿಸಿದ್ದಾರೆ. ಬಾಲ್ಯದಿಂದಲೂ ಆರೆಸ್ಸೆಸ್‌ನಲ್ಲೇ ಗುರುತಿಸಿಕೊಂಡಿರುವ ಅವರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮೂಲಕ ವಿದ್ಯಾರ್ಥಿ ರಾಜಕೀಯ ಆರಂಭಿಸಿದರು. 1994-95ರಲ್ಲಿ ದೌಲತ್ ರಾಮ್ ಕಾಲೇಜಿನ ಚುನಾವಣೆಯಲ್ಲಿ ಕಾರ್ಯದರ್ಶಿಯಾಗಿದ್ದ ರೇಖಾ, 1995-96ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಕಾರ್ಯದರ್ಶಿಯಾಗಿ, 1996-97ರಲ್ಲಿ ಅದೇ ಘಟಕದ ಅಧ್ಯಕ್ಷೆಯಾಗಿದ್ದರು.
2003-04ರಲ್ಲಿ ದೆಹಲಿ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿಯಾಗಿದ್ದ ಅವರು, 2004-06ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 2007ರ ಏಪ್ರಿಲ್‌ನಲ್ಲಿ ಉತ್ತರ ಪಿತಾಂಪುರದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದು, 2010ರ ಮಾರ್ಚ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು. ಪ್ರಸ್ತುತ ಅವರು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ ಹಾಗೂ ಶಾಲಿಮಾರ್ ಭಾಗ್ ವಾರ್ಡ್‌ನ ಪಾಲಿಕೆ ಸದಸ್ಯರಾಗಿದ್ದರು