e-Khatha-ಗ್ರಾಮಾಂತರ ಪ್ರದೇಶಗಳಲ್ಲಿ ಇ-ಖಾತೆ ಜಾರಿ ಕುರಿತು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಧೇಯಕಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇದರಿಂದ ಕಂದಾಯ ಬಡಾವಣೆ, ಗ್ರಾಮಠಾಣಾ ವ್ಯಾಪ್ತಿಯ ಮನೆ, ನಿವೇಶನಗಳ ಸಕ್ರಮಕ್ಕೆ ಅವಕಾಶ ಸಿಗಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇ-ಖಾತಾ ಕಡ್ಡಾಯವಾಗಿದ್ದು, ಆಸ್ತಿ ಮಾರಾಟ ಹಾಗೂ ಖರೀದಿಯಲ್ಲೂ ಇದರ ಬಳಕೆ ಅನಿವಾರ್ಯವಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಎಲ್ಲಾ ಉಪ-ನೋಂದಣಿದಾರರಿಗೆ ಇ-ಆಸ್ತಿ ಹಾಗೂ ಇ-ಖಾತಾ ಸಾಫ್ಟ್‌ವೇರ್ ಬಳಕೆ ಕುರಿತು ಆದೇಶಿಸಿದೆ. ಈ ನಿಯಮ ಉಲ್ಲಂಘಿಸಿದರೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು
ಗ್ರಾಮೀಣ ಇ-ಖಾತಾ ಜಾರಿಗೆ ವಿಶೇಷ ಕಾರ್ಯಪಡೆ ರಚನೆ
ಇ-ಸ್ವತ್ತು, ಇ-ಆಸ್ತಿ ಮತ್ತು ಇ-ವಿನ್ಯಾಸಗಳನ್ನು ಸುಗಮಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಇತ್ತೀಚೆಗೆ ವಿಕಾಸಸೌಧದಲ್ಲಿ ಮೂವರು ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಹಾಗೂ ನಗರ-ಗ್ರಾಮಾಂತರ ಯೋಜನಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಗ್ರಾಮೀಣ ಇ-ಖಾತಾ ಜಾರಿಗೆ ವಿಶೇಷ ಕಾರ್ಯಪಡೆ ರಚನೆಗೆ ಸೂಚನೆ ನೀಡಲಾಗಿದೆ. ಸಭೆಯ ನೇತೃತ್ವವನ್ನು ಕಂದಾಯ ಸಚಿವ ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಮಾಡಿದ್ದಾರೆ.
ಬಿಬಿಎಂಪಿ ಇ-ಖಾತಾ ಸಾಫ್ಟ್‌ವೇರ್ ಸರ್ವರ್ ಕ್ರ್ಯಾಶ್
ಇತ್ತೀಚೆಗೆ ಬೆಂಗಳೂರಿನ ನಾಗಸಂದ್ರ ಬಳಿಯ ದೊಡ್ಡ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಶಿಬಿರದಲ್ಲಿ 200ಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಬಿಬಿಎಂಪಿ ಇ-ಖಾತಾ ಅಪ್‌ಡೇಟ್ ಮಾಡಲಾಯಿತು. ಆದರೆ, ಸಾಫ್ಟ್‌ವೇರ್ ಸರ್ವರ್ ಏಕಾಏಕಿ ಕ್ರ್ಯಾಶ್‌ಗೊಂಡ ಪರಿಣಾಮ ಶಿಬಿರದ ಯಶಸ್ಸು ನಿರೀಕ್ಷಿತ ಮಟ್ಟದಲ್ಲಿ ಕಾಣಿಸಿಕೊಳ್ಳಲಿಲ್ಲ.ಈ ತಾಂತ್ರಿಕ ವೈಫಲ್ಯದಿಂದಾಗಿ ಹಲವಾರು ದಾಖಲೆಗಳು ನಷ್ಟವಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಅವುಗಳನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದಾರೆ. ಫೆಬ್ರವರಿ ಅಂತ್ಯದಲ್ಲಿ ಇ-ಖಾತಾ ಸಾಫ್ಟ್‌ವೇರ್ ತನ್ನ ಮೊದಲ ತಾಂತ್ರಿಕ ಸಮಸ್ಯೆಯನ್ನು ಎದುರಿಸಿತ್ತು
ಗ್ರಾಮೀಣ ಪ್ರದೇಶಗಳಲ್ಲಿ ಇ-ಖಾತಾ ಜಾರಿಗೆ ಸರ್ಕಾರದ ನಿರ್ಧಾರದಿಂದ ಸಾವಿರಾರು ಜನರು ಲಾಭ ಪಡೆಯಲಿದ್ದಾರೆ.