ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ಮಾಡದ ಕಾರಣದಿಂದ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಸರ್ಕಾರ 16ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು, ಜನವರಿ ತಿಂಗಳ ಮೊತ್ತವನ್ನು ಲಕ್ಷಾಂತರ ಯಜಮಾನಿಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಇನ್ನೂ ಬಾಕಿ ಇರುವ ಫಲಾನುಭವಿಗಳ ಖಾತೆಗೆ ನಾಳೆ ಅಥವಾ ನಾಡಿದ್ದು ಹಣ ಜಮಾ ಆಗಲಿದೆ ಎಂದು ತಿಳಿದು ಬಂದಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶೀಘ್ರದಲ್ಲಿಯೇ ಜನವರಿ ತಿಂಗಳ ಮೊತ್ತ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.
ಗುತ್ತಿಗೆ ಅವ್ಯವಹಾರದ ತನಿಖೆ ಮತ್ತು ಮುಂದಿನ ಕ್ರಮ
ರಾಜ್ಯದಲ್ಲಿ ನಡೆದ ಗುತ್ತಿಗೆ ಅವ್ಯವಹಾರದ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ಕುರಿತು ಮುಂದಿನ ಕ್ರಮಗಳನ್ನು ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ. ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್‌ಐ ನೇಮಕಾತಿ, ಉಪನ್ಯಾಸಕರ ನೇಮಕ, ಕೊರೋನಾ ಉಪಕರಣ ಖರೀದಿ ಮುಂತಾದ ಹಲವು ಹಗರಣಗಳು ನಡೆದಿದ್ದು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ ಮೊತ್ತ ಇಳಿಕೆ ಕುರಿತು ಚರ್ಚೆ
ಸರ್ಕಾರ ಗೃಹಲಕ್ಷ್ಮೀ ಯೋಜನೆಯ ಹಣವನ್ನು ₹1,000ಕ್ಕೆ ಇಳಿಕೆ ಮಾಡಲು ಚಿಂತನೆ ನಡೆಸುತ್ತಿದೆ. ಈ ಕುರಿತು ಅಂತಿಮ ನಿರ್ಧಾರ ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ
ಸಿಎಂ ಸಿದ್ದರಾಮಯ್ಯ ತಮ್ಮ ಅವಧಿ ಪೂರ್ಣಗೊಳಿಸುವ ಬಗ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ಅವರು ನಮ್ಮ ಹಿರಿಯ ನಾಯಕರು, ದೊಡ್ಡ ಮಾಸ್ ಲೀಡರ್. ಸರ್ಕಾರವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಅವರ ಮಾತು ನಮಗೆ ಮಾರ್ಗದರ್ಶಿ” ಎಂದರು.
ಮೀಸಲಾತಿ ಕುರಿತು ಸಚಿವರ ಪ್ರತಿಕ್ರಿಯೆ
ಮುಸ್ಲಿಂ ಮೀಸಲಾತಿ ಹೆಚ್ಚಳ ಕುರಿತಂತೆ ಮಾತನಾಡಿದ ಸಚಿವೆ, “ನಾವು ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿ ಕೇಳುತ್ತಿದ್ದೇವೆ. ಬೇರೆ ಸಮುದಾಯದವರೂ ತಮ್ಮ ಹಕ್ಕಿಗಾಗಿ ಬೇಡಿಕೆ ಹಾಕಬಹುದು. ಈ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ” ಎಂದು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದ ಘಟನೆ
ಬಾಗಲಕೋಟೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ, “ಚಾಮರಾಜನಗರದ ಘಟನೆಯಿಂದ ನಾವು ಪಾಠ ಕಲಿಸಿಕೊಂಡಿದ್ದೇವೆ. ಈಗ ಬಾಗಲಕೋಟೆ ಘಟನೆಯ ಸಂಪೂರ್ಣ ಮಾಹಿತಿ ಪಡೆದು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದರು.