IPL 2025 Time table-ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 18ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದೆ. 10 ತಂಡಗಳ ನಡುವಣ ಈ ಕದನವು ಮಾರ್ಚ್ 22 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲೇ ಬಲಿಷ್ಠ ತಂಡಗಳಾದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಆರ್ಸಿಬಿ ಕಣಕ್ಕಿಳಿಯಲಿದೆ. ವಿಶೇಷ ಎಂದರೆ ಈ ವರ್ಷ ಉಭಯ ತಂಡಗಳನ್ನು ಹೊಸ ನಾಯಕರುಗಳು ಮುನ್ನಡೆಸಲಿದ್ದಾರೆ.
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ವೇಳಾಪಟ್ಟಿ ಪ್ರಕಟಗೊಂಡಿದೆ. ಈ ಬಾರಿಯ ಐಪಿಎಲ್ ಟೂರ್ನಿಯು ಮಾರ್ಚ್ 22 ರಿಂದ ಶುರುವಾಗಲಿದ್ದು, ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ.

ಕಳೆದ ಬಾರಿಯ ರನ್ನರ್ ಅಪ್ ತಂಡವು ಮಾರ್ಚ್ 23 ರಂದು ಕಣಕ್ಕಿಳಿಯಲಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಸಂಜೆ 3.30 ರಿಂದ ಶುರುವಾಗಲಿದೆ.
ಇನ್ನು ಐಪಿಎಲ್ನ ಎಲ್ ಕ್ಲಾಸಿಕೊ ಕದನವಾಗಿ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವು ಮಾರ್ಚ್ 23 ರಂದೇ ನಡೆಯಲಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯವನ್ನು ರಾತ್ರಿ 7.30 ಕ್ಕೆ ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.
ಅದರಂತೆ ಐಪಿಎಲ್ನ ಮೊದಲೆರಡು ದಿನದಲ್ಲೇ ಆರು ಬಲಿಷ್ಠ ತಂಡಗಳು ಕಣಕ್ಕಿಳಿಯುವುದು ಖಚಿತ. ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ನ ಶ್ರೇಷ್ಠ ತಂಡಗಳೆನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಕದನವನ್ನು 2ನೇ ದಿನವೇ ವೀಕ್ಷಿಸುವ ಅವಕಾಶ ಐಪಿಎಲ್ ಪ್ರೇಮಿಗಳಿಗೆ ದೊರೆಯಲಿದೆ.
ಇನ್ನು ಮೊದಲ ಕ್ವಾಲಿಫೈಯರ್ ಪಂದ್ಯವು ಮೇ 20 ರಂದು ಹಾಗೂ ಮೇ 21 ರಂದು ಎಲಿಮಿನೇಟರ್ ಪಂದ್ಯಗಳು ನಡೆಯಲಿದೆ. ಈ ಮ್ಯಾಚ್ಗಳಿಗೆ ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಹಾಗೆಯೇ ಮೇ 23 ರಂದು 2ನೇ ಕ್ವಾಲಿಫೈಯರ್ ಪಂದ್ಯ ಹಾಗೂ ಮೇ 25 ರಂದು ಫೈನಲ್ ಮ್ಯಾಚ್ ಜರುಗಲಿದೆ. ಈ ಪಂದ್ಯಗಳಿಗೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂ ಆತಿಥ್ಯವಹಿಸಲಿದೆ.
