Land Race 2025 -2024-25ನೇ ಸಾಲಿನ ಆಯವ್ಯಯ ಘೋಷಣಾ ಕಂಡಿಕೆ-32 ರಲ್ಲಿ ಘೋಷಿಸಿರುವ “ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳ ತಳಿಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸುವ ಉದ್ದೇಶದಿಂದ ಒಂದು ಸಮುದಾಯ ಬೀಜ ಬ್ಯಾಂಕ್ ಅನ್ನು ಸ್ಥಾಪಿಸಲಾಗುವುದು’ ಯೋಜನೆಗೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಲೆಕ್ಕ ಶೀರ್ಷಿಕೆ: 2401-00-103-0-15 ರಡಿ ಕೃಷಿ ಪರಿಕರಗಳು ಮತ್ತು ಗುಣಮಟ್ಟ ನಿಯಂತ್ರಣ ಯೋಜನೆಯಡಿ ಒದಗಿಸಲಾದ ರೂ.160.00 ಕೋಟಿಗಳಲ್ಲಿ ಪ್ರಸ್ತಾಪಿತ ಯೋಜನೆಗೆ ರೂ.500.00 ಲಕ್ಷಗಳ ಅನುದಾನ ಅವಕಾಶ ಮಾಡಿಕೊಂಡು ಅನುಷ್ಠಾನಗೊಳಿಸಲು ಅನುಮೋದನೆಯನ್ನು ನೀಡಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ ಪತ್ರದಲ್ಲಿ ಕೃಷಿ ಆಯುಕ್ತರು, 2024-25ನೇ ಸಾಲಿನ ಆಯವ್ಯಯ ಘೋಷಣೆಯ ಕಂಡಿಕೆ-32 ರ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮದ ಅನುಷ್ಠಾನ ಮಾರ್ಗಸೂಚಿ ಕುರಿತು ಕೃಷಿ ಆಯುಕ್ತರ ಅಧ್ಯಕ್ಷತೆಯಲ್ಲಿ ದಿ:19/09/2024 ರಂದು ನಡೆದ ಸಭೆಯಲ್ಲಿ ವಿವರವಾಗಿ ಚರ್ಚಿಸಿ, ಅಂತಿಮಗೊಳಿಸಲಾಗಿದ್ದು, ಆದುದರಿಂದ “ರಾಜ್ಯದಲ್ಲಿ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮ”ವನ್ನು 2024-25ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಸಿದ್ಧಪಡಿಸಲಾಗಿರುವ ಮಾರ್ಗಸೂಚಿಯನ್ನು ಲಗತ್ತಿಸಿ ಅನುಮೋದನೆಯನ್ನು ನೀಡಿ ಸರ್ಕಾರದ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.
ರೈತರ ಸಾಂಪ್ರದಾಯಿಕ, ಪರಂಪರೆ, ಜಾನಪದ ಪ್ರಭೇದಗಳು ಎಂದೂ ಕರೆಯಲ್ಪಡುವ ದೇಸಿ ತಳಿಗಳು, ಸ್ಥಳೀಯ ಅಥವಾ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಅಭಿವೃದ್ಧಿ /ನಿರ್ವಹಿಸಲ್ಪಡುವ ತಳಿಗಳಾಗಿವೆ. ದೇಸಿ ತಳಿಗಳು ಹೊಂದಿರುವ ವಿಶಿಷ್ಟ ಗುಣಲಕ್ಷಣಗಳು ಮತ್ತು ಭೌಗೋಳಿಕ ಮೂಲಗಳ ಕಾರಣದಿಂದ ಕೆಲವೇ ರೈತರು ದೇಸಿ ತಳಿ ಕೃಷಿ ಮಾಡುವುದನ್ನು ಮುಂದುವರೆಸಿರುತ್ತಾರೆ. ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ಅಧಿಸೂಚಿತ ಪ್ರಭೇದಗಳಿಗಿಂತ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.
ಮಾನ್ಯ ಮುಖ್ಯಮಂತ್ರಿಗಳು ತಮ್ಮ 2024 ರ ಆಯವ್ಯಯ ಭಾಷಣದಲ್ಲಿ (ಕಂಡಿಕೆ 32) “ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳ ತಳಿಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸುವ ಉದ್ದೇಶದಿಂದ ಒಂದು ಸಮುದಾಯ ಬೀಜ ಬ್ಯಾಂಕ್ ಅನ್ನು ಸ್ಥಾಪಿಸಲಾಗುವುದು” ಎಂದು ಘೋಷಿಸಿರುತ್ತಾರೆ. ಸರ್ಕಾರಿ ಆದೇಶ ಸಂಖ್ಯೆ. AGRI/78/ACT/2024 ದಿನಾಂಕ:24.05.2024 ರನ್ವಯ ಕಾರ್ಯಕ್ರಮದ ಅನುಷ್ಠಾನಕ್ಕೆ ರೂ. 500.00 ಲಕ್ಷಗಳನ್ನು ಕೃಷಿ ಪರಿಕರ ಮತ್ತು ಗುಣಮಟ್ಟ ನಿಯಂತ್ರಣ ಯೋಜನೆಯ ಲೆಕ್ಕ ಶೀರ್ಷಿಕೆ: 2401-00-103-0-15, ಉಪ ಶೀರ್ಷಿಕೆ 106 ರಡಿ ಒದಗಿಸಿ ಮಂಜೂರು ಮಾಡಿದೆ.
II. ಯೋಜನೆಯ ಗುರಿ:
ಕರ್ನಾಟಕದಾದ್ಯಂತ ರೈತರ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವ ಮೂಲಕ ಸುಸ್ಥಿರ ಆಹಾರ ವ್ಯವಸ್ಥೆಗಾಗಿ ದೇಸಿ ತಳಿಗಳ ಸಂರಕ್ಷಣೆ ಮತ್ತು ಪ್ರಚಾರ.
III. ಯೋಜನೆಯ ಉದ್ದೇಶಗಳು ಮತ್ತು ವ್ಯಾಪ್ತಿ:
- ಕಣ್ಮರೆಯಾಗುತ್ತಿರುವ ತಳಿಗಳನ್ನೊಳಗೊಂಡಂತೆ ಆಯಾ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ದೇಸಿ ತಳಿಗಳ ಗುರುತಿಸುವಿಕೆ ಹಾಗೂ ಸಂರಕ್ಷಣೆ.
- ಗುರುತಿಸಿದ ದೇಸಿ ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡುವುದು.
- ದೇಸಿ ತಳಿಗಳನ್ನು ಹಿಂದಿನಿಂದಲೂ ಸಂರಕ್ಷಿಸಿ, ಕೃಷಿ ಮಾಡುತ್ತಿರುವ ರೈತರಿಗೆ ಬೆಂಬಲ ನೀಡುವುದು.
- ದೇಸಿ ತಳಿಗಳ ಜನಪ್ರಿಯತೆಗೆ ಬೆಂಬಲ ನೀಡುವುದು.
IV. ದೇಸಿ ತಳಿಗಳನ್ನು ಗುರುತಿಸಲು ಪರಿಗಣಿಸಬೇಕಾದ ಗುಣಲಕ್ಷಣಗಳು: - ರೈತರು ತಲೆಮಾರುಗಳಿಂದ ಬೆಳೆದ ಸಾಂಪ್ರದಾಯಿಕ ಪ್ರಭೇದಗಳು
- ಸ್ಥಳೀಯ ಕೃಷಿ ಪದ್ಧತಿ ಮತ್ತು ಪ್ರದೇಶಕ್ಕೆ ಹೊಂದಿಕೊಂಡಿರಬೇಕು.
ದೇಸಿ ತಳಿಗಳು ವಿಶಿಷ್ಟವಾದ ಗುಣಲಕ್ಷಣಗಳನ್ನು ಹೊಂದಿರಬೇಕು.
- Protection of Plant Varieties and Farmers’ Right Authority (PPV&FRA) ನೋಂದಾಯಿಸಿಕೊಂಡಿರಬಹುದು.
- ಅಧಿಸೂಚಿತಗೊಂಡ ತಳಿಯಾಗಿರಬಾರದು.
V. ಆಯ್ಕೆಯಾದ ಬೆಳೆಗಳು: ಆಯ್ದ ಬೆಳೆಗಳೆಂದರೆ ಭತ್ತ, ರಾಗಿ, ಜೋಳ, ತೊಗರಿ, ಹುರುಳಿ,
ಅವರೆ, ಅಲಸಂದೆ, ಮಡಕಿಕಾಳು (Mothbean), ಹುಚ್ಚೆಳ್ಳು, ಕುಸುಬೆ, ಎಳ್ಳು. ನವಣೆ, ಸಾಮೆ, ಊದಲು, ಕೊರಲೆ, ಹಾರಕ, ಬರಗು ಮತ್ತು ಸಲಹಾ ಸಮಿತಿಯು ಶಿಫಾರಸ್ಸು ಮಾಡುವ ಬೆಳೆಗಳು.
VI. ಯೋಜನೆಯ ಘಟಕಗಳು:
1 . ಮೂಲ ಸಮೀಕ್ಷೆ: ಸಮೀಕ್ಷೆಯು ಆನ್‌ಲೈನ್‌ನಲ್ಲಿ ನಡೆಸಲಾಗುವ ವಿವರಣಾತ್ಮಕ
ಸಮೀಕ್ಷೆಯಾಗಿದ್ದು, ದೇಸಿ ತಳಿ ಮತ್ತು ಅವುಗಳನ್ನು ಸಂರಕ್ಷಿಸುವ ಅಥವಾ ಕೃಷಿ ಮಾಡುವ ರೈತರ ಪ್ರಸ್ತುತ ಸ್ಥಿತಿಯ ಕುರಿತು ಪರಿಮಾಣಾತ್ಮಕ ಮತ್ತು ಗುಣಾತ್ಮಕ ಮಾಹಿತಿಯನ್ನು ಸಂಗ್ರಹಿಸುವುದಾಗಿದೆ. ಕಾರ್ಯಕ್ರಮದ ಅನುಷ್ಠಾನದ ಮೊದಲ ವರ್ಷದಲ್ಲಿ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಈ ಅಧ್ಯಯನವು ಕರ್ನಾಟಕ ರಾಜ್ಯದಲ್ಲಿ ದೇಸಿ ತಳಿಗಳು ಮತ್ತು ಇವುಗಳ ಮಾಲಿಕರನ್ನು ಗುರುತಿಸುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಸಮೀಕ್ಷೆಯ ಅನುಬಂಧವನ್ನು ಲಗತ್ತಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ದೇಸಿ ತಳಿಗಳ ಕೃಷಿ ಮಾಡುವ ರೈತರು ಮತ್ತು ಅಧಿಕಾರಿಗಳನ್ನು ಒಳಗೊಂಡ ಕಾರ್ಯಾಗಾರವನ್ನು ಜಂಟಿ ಕೃಷಿ ನಿರ್ದೇಶಕರು ಏರ್ಪಡಿಸುವುದು. ಸದರಿ ಕಾರ್ಯಾಗಾರದಲ್ಲಿ ಸಂರಕ್ಷಿಸುತ್ತಿರುವ ದೇಸಿ ತಳಿಗಳ ಬಗ್ಗೆ ಮಾಹಿತಿ ನೀಡಲು ರೈತರಿಗೆ ವೇದಿಕೆಯನ್ನು ಒದಗಿಸಬೇಕು. ಯೋಜನೆಯಲ್ಲಿ ಭಾಗವಹಿಸಲು ಒಪ್ಪಿಗೆ ಕುರಿತಂತೆ ರೈತರಿಗೆ ಮಾಹಿತಿ ನೀಡಬೇಕು. ಕಾರ್ಯಾಗಾರದ ನಂತರ ಸಮೀಕ್ಷೆ ನಡೆಸಬೇಕು.
ಕಾರ್ಯಾಗಾರದಲ್ಲಿ 40 ರಿಂದ 50 ರೈತರಿಗೆ ಭಾಗವಹಿಸಲು ಆಹ್ವಾನಿಸಬೇಕು. ಕಾರ್ಯಾಗಾರ ಮತ್ತು ಪ್ರಚಾರಕ್ಕಾಗಿ ರೂ.36000/-ಗಳನ್ನು ಮೀಸಲಿಡಲಾಗಿದೆ. ಕಾರ್ಯಾಗಾರದ ಭಾಗವಾಗಿ ದೇಸಿ/ ಸಾಂಪುದಾಯಿಕ ತಳಿಗಳ ವೈವಿಧ್ಯತೆ ಕುರಿತಂತೆ ಪ್ರದರ್ಶನವನ್ನು ಏರ್ಪಡಿಸಬೇಕು. ಪ್ರದರ್ಶನವು ದೇಸಿ ಬೀಜ / ಸಸ್ಯ / ತೆನೆ / ಹೂಗೊಂಚಲು ಹೊಂದಿರಬಹುದು. ಸದರಿ ಉದ್ದೇಶಕ್ಕಾಗಿ ಜಿಲ್ಲೆಗಳಿಗೆ ರೂ.10.80 ಲಕ್ಷಗಳನ್ನು ನಿಗದಿಪಡಿಸಲಾಗಿರುತ್ತದೆ.
ದೇಸಿ ತಳಿಗಳ ಸಂರಕ್ಷಣೆ ಮತ್ತು ಕೃಷಿ ಮಾಡುತ್ತಿರುವ ರೈತರಿಗೆ ಬೆಂಬಲ/ಪ್ರೋತ್ಸಾಹ:
ದೇಸಿ ತಳಿಗಳನ್ನು ಸಂರಕ್ಷಿಸಿ ಮತ್ತು ಬೆಳೆಸುವ ಮೂಲಕ ಕೃಷಿ ಪರಂಪರೆಯನ್ನು ಮುಂದುವರೆಸುತ್ತಿರುವ ರೈತರನ್ನು ಗುರುತಿಸುವುದು ಮತ್ತು ಉತ್ತೇಜಿಸುವುದು ಅತ್ಯಗತ್ಯವಿದ್ದು, ಇದು ದೇಸಿ ತಳಿಗಳ ನಿರಂತರ ಕೃಷಿಯನ್ನು ಪ್ರೋತ್ಸಾಹಿಸಲು, ಜೀವವೈವಿಧ್ಯತೆಯನ್ನು ಬೆಂಬಲಿಸಲು ಹಾಗೂ ಸುಸ್ಥಿರ ಕೃಷಿ ಪದ್ಧತಿಗಳನ್ನು ಪೋಷಿಸಲು ಸಹಕಾರಿಯಾಗಿರುತ್ತದೆ.
ಬೆಂಬಲ/ಪ್ರೋತ್ಸಾಹಗಳನ್ನು ನೀಡಲು ಅರ್ಹತೆ/ ಮಾನದಂಡಗಳು ಈ ಕೆಳಕಂಡಂತಿವೆ:
a) ದೇಸೀ ತಳಿಗಳ ಸಂರಕ್ಷಣೆ ಮತ್ತು ಕೃಷಿಯಲ್ಲಿ ತೊಡಗಿರುವ ರೈತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಇರಬೇಕು.
b) ಬೀಜ ಬ್ಯಾಂಕ್‌ನಲ್ಲಿರಿಸಲು ರೈತರು ಕಡ್ಡಾಯವಾಗಿ ಅಗತ್ಯ ಪ್ರಮಾಣದ ದೇಸಿ ತಳಿಗಳ ಬೀಜಗಳನ್ನು ನೀಡಲು ಸಿದ್ಧರಿರಬೇಕು.
c) ಜಾನುವಾರು ನಿರ್ವಹಣೆ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಪುನರುತ್ಪಾದಕ ಕೃಷಿ ಮತ್ತು ಇತರೆ ಸುಸ್ಥಿರ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರಬೇಕು.
ದೇಸಿ ತಳಿಗಳ ಸಂರಕ್ಷಣೆಗಾಗಿ ಬೆಂಬಲ/ಪ್ರೋತ್ಸಾಹಧನವನ್ನು ಮೂಲ ಸಮೀಕ್ಷೆಯಿಂದ ಪಡೆದ ದತ್ತಾಂಶವನ್ನು ಆಧರಿಸಿ ಸಲಹಾ ಸಮಿತಿಯು ನಿರ್ಧರಿಸುತ್ತದೆ. ಮೂಲ ಸಮೀಕ್ಷೆಯ ದತ್ತಾಂಶದ ಮೌಲೀಕರಣವನ್ನು ಜಿಲ್ಲಾ ಯೋಜನಾ ನಿರ್ವಹಣಾ ಘಟಕವು (DPMU) ನಿರ್ಧರಿಸುತ್ತದೆ. ಸದರಿ ಶಿಫಾರಸ್ಸಿನ ಆಧಾರದ ಮೇಲೆ ನೇರ ನಗದು ವರ್ಗಾವಣೆ (DBT) ಮೂಲಕ ದೇಸಿ ತಳಿಗಳ ಸಂರಕ್ಷಣಗಾಗಿ ಪ್ರೋತ್ಸಾಹಧನವನ್ನು ಪಾವತಿಸಲಾಗುತ್ತದೆ.
ದೇಸಿ ತಳಿಗಳ ಪ್ರಾಯೋಗಿಕ ಪ್ರಯೋಗಗಳು: ದೇಸಿತಳಿಗಳನ್ನು ಜನಪ್ರಿಯಗೊಳಿಸುವ
ಮೊದಲು ವಿಭಿನ್ನ ಪರಿಸ್ಥಿತಿಗಳಲ್ಲಿ ಕಾರ್ಯಕ್ಷಮತೆಗಾಗಿ ಮೌಲ್ಯಮಾಪನ ಮಾಡಬೇಕಿರುತ್ತದೆ. ಪ್ರಾಯೋಗಿಕ ಪ್ರಯೋಗಗಳು ನಿರ್ದಿಷ್ಟ ಪರಿಸರಕ್ಕೆ ಹೊಂದಿಕೊಳ್ಳುವ ದೇಸಿ ತಳಿಗಳನ್ನು ಗುರುತಿಸಲು, ಕೃಷಿ ತಾಂತ್ರಿಕತೆಗಳನ್ನು ಸುಧಾರಿಸಲು ಮತ್ತು ತಳಿಗಳ ವಿಶಿಷ್ಟ ಲಕ್ಷಣಗಳನ್ನು ಗುರುತಿಸಲು ಸಹಕಾರಿಯಾಗಿರುತ್ತದೆ,
ಸಲಹಾ ಸಮಿತಿಯು ಮೂಲ ಸಮೀಕ್ಷೆಯ ದತ್ತಾಂಶದ ಆಧಾರದ ಮೇಲೆ ತಳಿ ಪ್ರಯೋಗ (Participatory Varietal Trials-PVT) ❤ , ಮತ್ತು ಪ್ರಾಯೋಗಿಕ ಪ್ರಯೋಗಗಳನ್ನು ಕೈಗೊಳ್ಳಲು ಆಯಾ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಿಗೆ (SAUs) ಹಂಚಿಕೆ ಮಾಡಲಾಗುತ್ತದೆ. SAU ಗಳ ವತಿಯಿಂದ ಆಯ್ದ ರಾಜ್ಯ ಬೀಜ ಕ್ಷೇತ್ರಗಳು/ಸಂಶೋಧನಾ ಕೇಂದ್ರಗಳು/ ಪ್ರಗತಿಪರ ರೈತರ ಕ್ಷೇತ್ರಗಳಲ್ಲಿ PVT ಗಳನ್ನು ಕೈಗೊಂಡು, ಬಹು ಸ್ಥಳ ಪ್ರಯೋಗ (MLTS) ಗಳನ್ನು ಕೈಗೊಳ್ಳಲು ಉತ್ತಮ ತಳಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮುಂದುವರೆದು, ನಕಲುಗಳನ್ನು ತಡೆಯಲು ಸೂಕ್ತವಾದ ತಂತ್ರಜ್ಞಾನದ ಮುಖಾಂತರ ಉತ್ತಮ ತಳಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸದರಿ ಪ್ರಯೋಗಗಳನ್ನು ಕಾರ್ಯಕ್ರಮದ ಎರಡನೇ ವರ್ಷದಿಂದ ಕೈಗೊಳ್ಳಲು SAU ಗಳಿಗೆ ಇಲಾಖೆಯಿಂದ ಅನುದಾನವನ್ನು ಒದಗಿಸಲಾಗುವುದು.
ಉತ್ಪಾದನೆ ಮತ್ತು ಪ್ರಮಾಣೀಕರಣ ಪ್ರೋತ್ಸಾಹಧನ:
ಉತ್ಪಾದನಾ ಪ್ರೋತ್ಸಾಹಧನ: ಕಾಂಪೋಸ್ಟ್, ಎರೆಹುಳು ಗೊಬ್ಬರ, ಕೊಟ್ಟಿಗೆಗೊಬ್ಬರ,
ಜೈವಿಕ ಗೊಬ್ಬರ, ಹಸಿರೆಲೆ ಗೊಬ್ಬರ ಹಾಗೂ ಇತರೆ ಸಾವಯವ ಗಿಡಮೂಲಿಕೆಗಳನ್ನು ಬಳಸಿ ದೇಸಿ ತಳಿಗಳ ಕೃಷಿ ಮಾಡುತ್ತಿರುವ ರೈತರಿಗೆ ಉತ್ಪಾದನಾ ಪ್ರೋತ್ಸಾಹಧನವನ್ನು ನೀಡಲಾಗುವುದು.
ಉತ್ಪಾದನಾ ಪ್ರೋತ್ಸಾಹಧನವು ಮೂಲ ಸಮೀಕ್ಷೆಯ ದತ್ತಾಂಶವನ್ನು ಆಧರಿಸಿರುತ್ತವೆ. ರೈತಸಿರಿ ಯೋಜನೆಯಡಿಯಲ್ಲಿ ಅರ್ಹರಿರುವ ಸಿರಿಧಾನ್ಯ ಬೆಳೆಯುವ ರೈತರು ಉತ್ಪಾದನಾ ಪ್ರೋತ್ಸಾಹಧನ ಪಡೆಯಲು ಅರ್ಹರಿರುವುದಿಲ್ಲ.
ಶೇಖರಣಾ ಪ್ರೋತ್ಸಾಹಧನ: ದೇಸಿ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಶೇಖರಣಾ
ಸೌಲಭ್ಯಗಳಿಗೆ ಪ್ರೋತ್ಸಾಹಧನವನ್ನು ನೀಡಲಾಗುವುದು. ಇದು ಅಸ್ತಿತ್ವದಲ್ಲಿರುವ ಶೇಖರಣಾ ಸೌಲಭ್ಯಗಳನ್ನು ನವೀಕರಿಸಲು ಮತ್ತು ನಿರ್ವಹಿಸಲು ಸಹಕಾರಿಯಾಗಿರುತ್ತದೆ.
ಪ್ರಮಾಣೀಕರಣ ಪ್ರೋತ್ಸಾಹಧನ: ಮಾರುಕಟ್ಟೆಗಳಲ್ಲಿ ವಿಶ್ವಾಸಾರ್ಹತೆಗಾಗಿ ಸಾವಯವ
ಕ್ಷೇತ್ರಗಳ ಪ್ರಮಾಣೀಕರಣ ಅತ್ಯಗತ್ಯವಾಗಿದ್ದು ದೇಸಿ ತಳಿಗಳನ್ನು ಬೆಳೆಯುವ ರೈತರಿಗೆ ಶೇಕಡಾ 90 ರವರೆಗಿನ ಪ್ರಮಾಣೀಕರಣ ಶುಲ್ಕವನ್ನು ಭರಿಸಲಾಗುವುದು.
ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಯೋಜನೆಯ ಎರಡನೇ ವರ್ಷದಲ್ಲಿ ಸಹಾಯಧನದ ಮಾಹಿತಿಯೊಂದಿಗೆ ವಿವರವಾದ ಮಾರ್ಗಸೂಚಿಯನ್ನು ನೀಡಲಾಗುವುದು.