Micro Finance-2025 ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಕೊನೆಗೂ ಸಮ್ಮತಿ ಸೂಚಿಸಿದ್ದು, ಸಾಲ ವಸೂಲಿ ವೇಳೆ ಸಾರ್ವಜನಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಿಸಲು ಸರ್ಕಾರ ಪ್ರಯೋಗಿಸಿದ ಅಸ್ತ್ರವಾದ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.
ತಾವು ಕೋರಿದ ವಿವರಣೆಗಳಿಗೆ ಸರ್ಕಾರ ನೀಡಿದ ಸಮರ್ಥನೆಗಳಿಗೆ ಒಪ್ಪಿಗೆ ಸೂಚಿಸುವ ಜತೆಗೆ ಕೆಲವೊಂದು ಸಲಹೆಗಳನ್ನು ನೀಡಿ, ಈ ಬಗ್ಗೆ ಅಧಿವೇಶನದಲ್ಲಿ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆಯೂ ಈ ವೇಳೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಈ ಮೂಲಕ ಮೈಕ್ರೋ ಫೈನಾನ್ಸ್ ಕ್ಷೇತ್ರದಲ್ಲಿ ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆ ಇದ್ದು, ಮುಂಬರುವ ಅಧಿವೇಶನದಲ್ಲಿ ಚರ್ಚೆ ನಡೆದು ವಿಧೇಯಕ ಜಾರಿಯಾಗುವ ನಿರೀಕ್ಷೆ ಇದೆ.
ಸಮರ್ಥನೆ ನೀಡಿದ್ದ ಸರ್ಕಾರ:
ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಂಪನಿಗಳು ಜನಸಾಮಾನ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯ ತಡೆಗಟ್ಟಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಸಿದ್ಧಪಡಿಸಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಆದರೆ, ಈ ಸುಗ್ರೀವಾಜ್ಞೆಗೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯಪಾಲರು ಸರ್ಕಾರಕ್ಕೆ ವಾಪಸು ಕಳುಹಿಸಿದ್ದರು. ಬಳಿಕ ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಜಾರಿಗೊಳಿಸುವ ಅನಿವಾರ್ಯತೆ ಬಗ್ಗೆ ಸಮರ್ಥನೆ ನೀಡಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಇದೀಗ ರಾಜ್ಯಪಾಲರು ಆ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ.
ಮುಂದಿನ ದಿನದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ವಿವಾದಗಳು ಸೃಷ್ಟಿಯಾದರೆ ಅವುಗಳನ್ನು ಇತ್ಯರ್ಥಪಡಿಸಲು ಸಾಲಗಾರ ಮತ್ತು ಲೇವಾದೇವಿದಾರನ ನಡುವೆ ಮಧ್ಯಸ್ಥಗಾರನಾಗಿ ಕಾರ್ಯ ನಿರ್ವಹಿಸಲು ಸರ್ಕಾರವು ಒಂಬುಡ್ಸ್‌ಮನ್ ನೇಮಕ ಮಾಡಬಹುದು. ನೋಂದಣಿಯಾಗದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಕ್ರಮ ಹಣ ವರ್ಗಾವಣೆ ಮಾಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಉತ್ತಮ ಹೆಜ್ಜೆಯಾಗಿದೆ. ಸುಗ್ರೀವಾಜ್ಞೆಯು ಉತ್ತಮ ಉದ್ದೇಶಗಳನ್ನು ಹೊಂದಿದ್ದರೂ ಅದು ಉಂಟು ಮಾಡುವ ಕಾನೂನು ಮತ್ತು ಸಾಮಾಜಿಕ ಪರಿಣಾಮವನ್ನು ಉಭಯ ಸದನದಲ್ಲಿ ವಿವರವಾಗಿ ಚರ್ಚಿಸಬೇಕಾಗಿದೆ, ಸುಗ್ರೀವಾಜ್ಞೆ ಜಾರಿಗೊಳಿಸುವ ವೇಳೆ ಈ ಸಲಹೆ ಪಾಲಿಸಬೇಕು ಎಂದು ಎಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ.
ಕಾನೂನು ಹೋರಾಟಕ್ಕೆ ಕಾರಣ:
ಮೂಲಭೂತ ಹಕ್ಕುಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಆರ್‌ಬಿಐ ಅಡಿ ನೋಂದಣಿಯಾದ ಎಲ್ಲಾ ಸಹಕಾರಿ ಬ್ಯಾಂಕ್‌ಗಳು, ಹಣಕಾಸು ಕಂಪನಿಗಳು, ವಸತಿ ಹಣಕಾಸು ನಿಗಮದಿಂದ ನಿಯಂತ್ರಿಸಲ್ಪಡುವ ಸಣ್ಣ ಹಣಕಾಸು ಬ್ಯಾಂಕ್‌ಗಳು, ಸ್ಥಳೀಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಇದರ ವ್ಯಾಪ್ತಿಗೆ ತರಬಾರದು. ಸುಗ್ರೀವಾಜ್ಞೆಯು ಕಾನೂನು ರೀತಿ ನೋಂದಣಿಯಾಗಿರುವ ಸಂಸ್ಥೆಗಳಿಗೆ ತೊಂದರೆ ಮಾಡಬಾರದು. ಪ್ರಾಮಾಣಿಕವಾಗಿ ಸಾಲ ಕೊಟ್ಟವರಿಗೆ ಬಡ್ಡಿ ಸಹಿತ ಸಾಲ ವಸೂಲಿ ಮಾಡುವ ಪ್ರಕ್ರಿಯೆ ಬಗ್ಗೆ ಮುಂಜಾಗ್ರತೆ ವಹಿಸಬೇಕಾಗಿದೆ. ಇಲ್ಲದಿದ್ದರೆ ಬಾಕಿ ಸಾಲದ ಮೊತ್ತವನ್ನು ಮರುಪಡೆಯಲೂ ತೊಂದರೆಯಾಗಬಹುದು. ಅಲ್ಲದೆ, ಇದು ಕಾನೂನು ಹೋರಾಟಕ್ಕೆ ಕಾರಣವಾಗಬಹುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.
ಸುಗ್ರೀವಾಜ್ಞೆಯಲ್ಲಿ ಏನಿದೆ?:
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನೋಂದಣಿ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಪಡೆಯದೆ ಯಾವುದೇ ಸಾಲವನ್ನು ಮಂಜೂರು ಮಾಡುವಂತಿಲ್ಲ ಮತ್ತು ಯಾವುದೇ ಸಾಲವನ್ನು ವಸೂಲು ಮಾಡುವಂತೆಯೂ ಇಲ್ಲ. ಸಾಲ ನೀಡುವ ಸಂಸ್ಥೆಗಳು ನಿಯಮಬಾಹಿರವಾಗಿ ನಡೆದುಕೊಂಡರೆ ಅಂತಹ ಸಂಸ್ಥೆಗಳನ್ನು ರದ್ದುಗೊಳಿಸಬಹುದು. ಆದರೆ, ಅವುಗಳ ಅಹವಾಲುಗಳನ್ನು ಆಲಿಸಲು ಅವಕಾಶ ನೀಡಬೇಕು.
ಸಂಸ್ಥೆಗಳ ಅಹವಾಲು ಆಲಿಸದೆ ನೋಂದಣಿ ರದ್ದು ಮಾಡುವಂತಿಲ್ಲ. ಸಾಲ ನೀಡುವ ಸಂಸ್ಥೆಗಳು ಅಥವಾ ಲೇವಾದೇವಿದಾರರು ಭದ್ರತೆಯನ್ನು ಕೋರುವಂತಿಲ್ಲ. ಸಾಲ ನೀಡುವ ವೇಳೆ ವಿಧಿಸುವ ಬಡ್ಡಿ ದರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸಾಲಗಾರರೊಂದಿಗಿನ ಎಲ್ಲಾ ಪತ್ರ ವ್ಯವಹಾರಗಳು ಕನ್ನಡದಲ್ಲಿರಬೇಕು. ಷರತ್ತುಗಳು ಅರ್ಥಪೂರ್ಣವಾಗಿದ್ದು, ಸಾಲಗಾರನು ಸೂಕ್ತ ನಿರ್ಧಾರ ಕೈಗೊಳ್ಳುವ ರೀತಿಯಲ್ಲಿರಬೇಕು. ಸ್ಥಳೀಯ ಪ್ರದೇಶದಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿರಬೇಕು ಎಂದು ಉದ್ದೇಶಿತ ಕಾಯ್ದೆಯಲ್ಲಿ ಹೇಳಲಾಗಿದೆ.
ರಾಜ್ಯಪಾಲರ ಸಲಹೆಗಳು
- ಆರ್‌ಬಿಐ ಅಡಿ ನೋಂದಣಿಯಾದ ಹಣಕಾಸು ಕಂಪನಿಗಳನ್ನು ಸುಗ್ರೀವಾಜ್ಞೆ ವ್ಯಾಪ್ತಿಗೆ ತರಬಾರದು
- ಕಾನೂನು ರೀತಿ ನೋಂದಣಿಯಾಗಿರುವ ಸಂಸ್ಥೆಗಳಿಗೆ ಈ ಸುಗ್ರೀವಾಜ್ಞೆ ತೊಂದರೆ ಮಾಡಬಾರದು
- ಪ್ರಾಮಾಣಿಕವಾಗಿ ಸಾಲ ಕೊಟ್ಟವರು ಬಡ್ಡಿಸಹಿತ ವಸೂಲು ಮಾಡಲು ಮುಂಜಾಗ್ರತೆ ವಹಿಸಬೇಕು
- ಇಲ್ಲದಿದ್ದರೆ ಬಾಕಿ ಸಾಲ ಪಡೆಯಲು ತೊಂದರೆಯಾಗಿ, ಕಾನೂನು ಹೋರಾಟಗಳು ನಡೆಯಬಹುದು
- ವಿವಾದ ಸೃಷ್ಟಿಯಾದರೆ ಇತ್ಯರ್ಥಕ್ಕೆ ಸಾಲಗಾರ- ಲೇವಾದೇವಿದಾರನ ನಡುವೆ ಒಂಬುಡ್ಸ್‌ಮನ್ ಇರಲಿ
ಸುಗ್ರೀವಾಜ್ಞೆ ಏಕೆ?
- ಮೈಕ್ರೋಫೈನಾನ್ಸ್ ಕಂಪನಿಗಳು ಸಾಲ ವಸೂಲು ಮಾಡಲು ಕಠಿಣ ಕ್ರಮ ಕೈಗೊಂಡಿದ್ದರಿಂದ ಹಲವು ಸಾಲಗಾರರ ಆತ್ಮಹತ್ಯೆ
- ಫೈನಾನ್ಸ್ ಕಂಪನಿಗಳ ಸತತ ಕಿರುಕುಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ. ಹೀಗಾಗಿ ಸುಗ್ರೀವಾಜ್ಞೆ ರೂಪಿಸಿದ್ದ ಸರ್ಕಾರ
- ಸುಗ್ರೀವಾಜ್ಞೆ ಬಗ್ಗೆ ಆರು ಆಕ್ಷೇಪ ವ್ಯಕ್ತಪಡಿಸಿ ವಾಪಸ್ ಕಳುಹಿಸಿದ್ದ ರಾಜ್ಯಪಾಲರು. ಆರೂ ಆಕ್ಷೇಪಗಳಿಗೂ ಉತ್ತರ ನೀಡಿದ್ದ ಸರ್ಕಾರ
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಅಂತಿಮವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಹಲವು ಸಲಹೆಗಳನ್ನು ನೀಡಲಾಗಿದ್ದು ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ಈ ಹಿಂದೆಯೂ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯಪಾಲರ ಅನುಮೋದನೆಗಾಗಿ ಮೈಕ್ರೋ ಸುಗ್ರೀವಾಜ್ಞೆಯನ್ನು ಕಳುಹಿಸಿತ್ತು. ಆದರೆ ರಾಜಭವನ ಕೆಲ ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿತ್ತು. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಅಂಕುಶ ಹಾಕಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಹಲವಾರು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಡಿವಾಣ ಹಾಕಲು ಮುಂದಾಗಿದೆ. ಮುಂದಿನ ಅಧಿವೇಶನದಲ್ಲಿ ಅದರ ಸಾಧಕ ಮತ್ತು ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡುವ ನಿರ್ಧಾರ ಮಾಡಬೇಕಿದೆ.
ಈ ಸುಗ್ರೀವಾಜ್ಞೆಯು ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂ.ಗಳವರೆಗೆ ವಿಸ್ತರಿಸಬಹುದಾದ ದಂಡವನ್ನು ವಿಧಿಸಲು ಅವಕಾಶವನ್ನು ಹೊಂದಿದೆ. ಈ ಸುಗ್ರೀವಾಜ್ಞೆಯ ಅಡಿಯಲ್ಲಿರುವ ಅಪರಾಧಗಳು ಜಾಮೀನು ರಹಿತವಾಗಿವೆ. ಕರ್ನಾಟಕ ಮೈಕ್ರೋಫೈನಾನ್ಸ್ (ಬಲವಂತದ ಕ್ರಮಗಳ ತಡೆಗಟ್ಟುವಿಕೆ) ಸುಗ್ರೀವಾಜ್ಞೆ 2025 ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳನ್ನು, ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋಫೈನಾನ್ಸ್ ಸಂಸ್ಥೆಗಳು ಅಥವಾ ಹಣ ಸಾಲ ನೀಡುವ ಏಜೆನ್ಸಿಗಳು ಅಥವಾ ಸಂಸ್ಥೆಗಳಿಂದ ಬಡ್ಡಿದರಗಳು ಮತ್ತು ಬಲವಂತದ ವಸೂಲಾತಿ ವಿಧಾನಗಳ ಅನಗತ್ಯ ತೊಂದರೆಯಿಂದ ರಕ್ಷಿಸುವ ಮತ್ತು ನಿವಾರಿಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ತಿಳಿಸಿದೆ.
ಮೈಕ್ರೋಫೈನಾನ್ಸ್ ಕಂಪನಿಗಳು ಇಂದಿನಿಂದ 30 ದಿನಗಳ ಒಳಗೆ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಅವರು ಕಾರ್ಯನಿರ್ವಹಿಸುತ್ತಿರುವ ಗ್ರಾಮ, ಪಟ್ಟಣ ಮತ್ತು ಜಿಲ್ಲೆಯನ್ನು ಸಹ ನಿರ್ದಿಷ್ಟಪಡಿಸಬೇಕು. ಸಂಸ್ಥೆಗಳು ಬಡ್ಡಿದರ, ಸರಿಯಾದ ಪರಿಶ್ರಮ ಮತ್ತು ವಸೂಲಾತಿ ವ್ಯವಸ್ಥೆ, ಹಣ ಸಾಲ ನೀಡುವ ಚಟುವಟಿಕೆಯನ್ನು ನಡೆಸಲು ಅಧಿಕಾರ ಹೊಂದಿರುವ ವ್ಯಕ್ತಿಗಳ ಪಟ್ಟಿಯನ್ನು ಸಹ ನಮೂದಿಸಬೇಕು. ಈ ಸುಗ್ರೀವಾಜ್ಞೆ ಜಾರಿಗೆ ಬಂದ ನಂತರ ಕಾರ್ಯನಿರ್ವಹಿಸುತ್ತಿರುವ ಅಥವಾ ಹಣ ಸಾಲ ನೀಡುವ ವ್ಯವಹಾರವನ್ನು ಪ್ರಾರಂಭಿಸಲು ಉದ್ದೇಶಿಸಿರುವ ಯಾವುದೇ ಕಿರುಬಂಡವಾಳ ಸಂಸ್ಥೆಗಳು ಅಥವಾ ಹಣ ಸಾಲ ನೀಡುವ ಸಂಸ್ಥೆಗಳು ಅಥವಾ ಸಂಸ್ಥೆಗಳು ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಮಾಡದೇ ಯಾವುದೇ ಸಾಲಗಳನ್ನು ನೀಡಬಾರದು ಅಥವಾ ಯಾವುದೇ ಸಾಲಗಳನ್ನು ವಸೂಲಿ ಮಾಡಬಾರದು ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ.
ನೋಂದಣಿ ಪ್ರಾಧಿಕಾರವು ಸ್ವಯಂಪ್ರೇರಿತವಾಗಿ ಅಥವಾ ದೂರನ್ನು ಸ್ವೀಕರಿಸಿದ ನಂತರ ನೋಂದಣಿಯನ್ನು ರದ್ದುಗೊಳಿಸುವ ಅಥವಾ ಅಮಾನತುಗೊಳಿಸುವ ಹಕ್ಕನ್ನು ಹೊಂದಿದೆ ಎಂದು ಸರ್ಕಾರ ಹೇಳಿದೆ. ಈ ಸುಗ್ರೀವಾಜ್ಞೆ ಜಾರಿಗೆ ಬರುವ ದಿನಾಂಕದ ಮೊದಲು ಸಾಲಗಾರರಿಂದ ಪಡೆದ ಯಾವುದೇ ಭದ್ರತಾ ಪತ್ರಗಳನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ. ಅಲ್ಲದೆ ವಿಧಿಸಲಾದ ಬಡ್ಡಿದರಗಳಲ್ಲಿ ಪಾರದರ್ಶಕತೆಯನ್ನು ಸರ್ಕಾರ ಒತ್ತಾಯಿಸಿದೆ. ಸಾಲಗಾರರಿಂದ ಹಣವನ್ನು ವಸೂಲಿ ಮಾಡಲು MFI ವಿರುದ್ಧ ಬಲವಂತದ ಕ್ರಮಗಳಿಗೆ ದಂಡ ವಿಧಿಸುವ ಅವಕಾಶವಿದೆ.
ಸಾಲಗಾರರು ಅಥವಾ ಅವರ ಕುಟುಂಬ ಸದಸ್ಯರ ಮೇಲೆ ಬಲವಂತದ ಕ್ರಮಗಳನ್ನು ಹೇರುವುದು, ಅಡ್ಡಿಪಡಿಸುವುದು, ಹಿಂಸೆ ನೀಡುವುದು, ಅವಮಾನಿಸುವುದು, ಬೆದರಿಸುವುದು ಅಥವಾ ಸಾಲಗಾರರು, ಅವರ ಕುಟುಂಬ ಸದಸ್ಯರನ್ನು ನಿರಂತರವಾಗಿ ಹಿಂಬಾಲಿಸುವುದು ಅಥವಾ ಅವರ ಒಡೆತನದ ಅಥವಾ ಬಳಸಿದ ಯಾವುದೇ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯುವುದು ಎಂದು ವ್ಯಾಖ್ಯಾನಿಸಲಾಗಿದೆ. ಸಾಲಗಾರರು ವಾಸಿಸುವ ಮನೆ ಅಥವಾ ಇತರ ಸ್ಥಳಗಳಿಗೆ ಆಗಾಗ್ಗೆ ಹೋಗುವುದು, ಹಣವನ್ನು ವಸೂಲಿ ಮಾಡಲು ಹೊರಗುತ್ತಿಗೆ ನೀಡುವುದು ಮತ್ತು ಸಾಲಗಾರರಿಂದ ಯಾವುದೇ ದಾಖಲೆಯನ್ನು ಬಲವಂತವಾಗಿ ತೆಗೆದುಕೊಳ್ಳುವುದು ಸಹ ದಂಡದ ಕ್ರಮಕ್ಕೆ ಆಹ್ವಾನ ನೀಡುತ್ತದೆ.