ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ತ್ರೀಶಕ್ತಿ, ಭಾಗ್ಯಲಕ್ಷ್ಮಿ, ಗೃಹಲಕ್ಷ್ಮಿ, ಮಹಿಳಾ ಸಹಾಯವಾಣಿ ಸೇರಿದಂತೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ವಿಧಾನಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರವು ಹಲವಾರು ವಿಶೇಷ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವುದನ್ನು ವಿವರಿಸಿದರು.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ:
- ಉದ್ಯೋಗಿನಿ ಯೋಜನೆ
- ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ
- ಯೋಜನೆಚೇತನ ಯೋಜನೆ
- ಧನಶ್ರೀ ಯೋಜನೆ
- ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಮತ್ತು ವಸತಿ ನಿರ್ಮಾಣ ಯೋಜನೆ
- ಬಡ್ಡಿ ಸಹಾಯಧನ ಯೋಜನೆ
- ಮಹಿಳಾ ತರಬೇತಿ ಯೋಜನೆ
- ವೃದ್ಧಿ ಮತ್ತು ಕಿರುಸಾಲ ಯೋಜನೆ
- ಆಯಸಿಡ್ ದಾಳಿ ಸಂತ್ರಸ್ತರಿಗೆ ಸಾಲ ಸೌಲಭ್ಯ ಯೋಜನೆ
ಮಕ್ಕಳ ಹಕ್ಕು ರಕ್ಷಣೆಗಾಗಿ ಪ್ರಸ್ತುತ ರಾಜ್ಯದಲ್ಲಿ:
- 32 ಸರ್ಕಾರಿ ಬಾಲಕರ ಬಾಲಮಂದಿರ
- 30 ಸರ್ಕಾರಿ ಬಾಲಕಿಯರ ಬಾಲಮಂದಿರ
- 1 ಶಿಶುಮಂದಿರ (0-6 ವರ್ಷದ ಮಕ್ಕಳಿಗೆ)
- 4 ಬುದ್ಧಿಮಾಂದ್ಯ ಮಕ್ಕಳ ಬಾಲಮಂದಿರ
- 16 ಬಾಲಕರ ವೀಕ್ಷಣಾಲಯ,
- 1 ಬಾಲಕಿಯರ ವೀಕ್ಷಣಾಲಯ
- 21 ಸರ್ಕಾರಿ ಮತ್ತು 23 ಸರ್ಕಾರೇತರ ವಿಶೇಷ ದತ್ತು ಸಂಸ್ಥೆಗಳು
- 29 ತೆರೆದ ತಂಗುದಾಣಗಳು
- 32 ನಿರ್ಗತಿಕ ಮಕ್ಕಳ ಕುಟೀರಗಳು
- 5 ಅರ್ಹ ಸಂಸ್ಥೆಗಳು ಮತ್ತು 7 ಅನುಪಾಲನಾ ಗೃಹಗಳು
ಈ ಎಲ್ಲಾ ಯೋಜನೆಗಳು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ದಿಗೆ ಮಹತ್ತರ ಪಾತ್ರ ವಹಿಸುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರ ಪರವಾಗಿ ಉತ್ತರಿಸಲಾಯಿತು.
ಉದ್ಯೋಗಿನಿ ಯೋಜನೆ
ಉದ್ಯೋಗಿನಿ ಯೋಜನೆಯಡಿಯಲ್ಲಿ ಅರ್ಹ ಮಹಿಳಾ ಉದ್ಯಮಿಗಳಿಗೆ ಉದ್ಯಮ ಸ್ಥಾಪಿಸಲು ಮತ್ತು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಗರಿಷ್ಠ ರೂ. 1,00,000/-ಗಳವರೆಗೆ ಬ್ಯಾಂಕ್ ಗಳ ಮೂಲಕ ಸಾಲ ನೀಡುವ ಕಾರ್ಯಕ್ರಮ ರೂಪಿಸಿದೆ. ಹಣಕಾಸು ಸಂಸ್ಥೆಗಳು ಅಥವಾ ಬ್ಯಾಂಕ್ ಗಳು ಮಂಜೂರು ಮಾಡುವ ಸಾಲದ ಮೊತ್ತಕ್ಕೆ ನಿಗಮದಿಂದ ಸಹಾಯಧನ ಮಂಜೂರು ಮಾಡಲು ಅವಕಾಶವಿದೆ.
ಧನಶ್ರೀ ಯೋಜನೆ
ಈ ಯೋಜನೆಯು 2016-17ನೇ ಸಾಲಿನಿಂದ ಜಾರಿಗೆ ಬಂದಿರುತ್ತದೆ. ಈ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ 18-60 ವಯೋಮಿತಿಯ ಹೆಚ್. ಐ. ವಿ ಸೋಂಕಿತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಂಡು ಅಭಿವೃದ್ಧಿ ಹೊಂದಲು ಪ್ರೇರೇಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.